ಟೋಂಕ್
ರಾಜಸ್ಥಾನ ರಾಜ್ಯದ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯ ಪಟ್ಟಣ. ಉತ್ತರಕ್ಕೆ ಜಯಪುರ, ಪೂರ್ವಕ್ಕೆ ಸವಾಯಿ ಮಾಧೋಪುರ, ದಕ್ಷಿಣಕ್ಕೆ ಬೂಂದೀ, ನೈಋತ್ಯಕ್ಕೆ ಝೀಲವಾಡ ಮತ್ತು ಪಶ್ಚಿಮಕ್ಕೆ ಅಜ್ಮೇರ್ ಜಿಲ್ಲೆಗಳು ಇದರ ಮೇರೆಗಳು. ವಿಸ್ತೀರ್ಣ 7,200 ಚ.ಕಿಮೀ., ಜನಸಂಖ್ಯೆ 6,25,830 (1971). ಜಿಲ್ಲೆಯಲ್ಲಿರುವ ತಾಲ್ಲೂಕುಗಳು ಮಾಲಾಪುರ (1,06,423), ಟೋಂಕ್ (1,66,470), ನವಾಯಿ (95,863), ಟೋಡಾರಾಯಸಿಂಗ್ (75,484), ದೀವೋಲಿ (1,05,710) ಮತ್ತು ಉನಿಯಾರ (75,880).

ಮೊದಲಿನಿಂದಲೂ ಹಿಂದೂ-ಮುಸ್ಲಿಮ್ ಮತೀಯ ಸಾಮರಸ್ಯಕ್ಕೆ ಹೆಸರಾದ ಈ ಜಿಲ್ಲೆ ಆರು ಬೇರೆ ಬೇರೆ ಜಹಗೀರುಗಳಲ್ಲಿ ಹಂಚಿಹೋದ ಒಂದು ಸಂಸ್ಥಾನವಾಗಿತ್ತು. 1948ರ ಏಪ್ರಿಲ್‍ನಲ್ಲಿ ಇದು ಭಾರತ ಒಕ್ಕೂಟದಲ್ಲಿ ವಿಲೀನಗೊಂಡು ರಾಜಸ್ಥಾನದ ಸಂವಿಧಾನಾತ್ಮಕ ಆಡಳಿತಕ್ಕೊಳಪಟ್ಟಿತು. ಈ ಜಿಲ್ಲೆ ಮುಖ್ಯವಾಗಿ ಬಯಲುಸೀಮೆ. ನಡುನಡುವೆ ಗುಡ್ಡ-ಬೆಟ್ಟಗಳುಂಟು. ಜಿಲ್ಲೆಯ ಮುಖ್ಯ ನದಿ ಬನಾಸ್. ಮಾಶಿ ಮತ್ತು ಸೋಹದ್ರಾ ಇದರ ಉಪನದಿಗಳು. ಬನಾಸ್ ನದಿ ಅರಾವಲೀ ಪರ್ವತದ ದಕ್ಷಿಣ ಭಾಗದಲ್ಲಿ ಉದಯಪುರ ಜಿಲ್ಲೆಯಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ 525 ಕಿಮೀ. ಹರಿದು ರಾಜಸ್ಥಾನದ ಪೂರ್ವ ಗಡಿಗುಂಟ ಹರಿಯುವ ಚಿಂಬಲ್ ನದಿಯನ್ನು ಕೂಡ ಮುಂದೆ ಜಮುನಾ ನದಿಯಲ್ಲಿ ಸಂಗಮಿಸುತ್ತದೆ. ಮಾಶಿ ನದಿಯ ಮೇಲೆ 3.64 ಸಾವಿರ ಹೆಕ್ಟೇರ್ ಜಮೀನು ಸಾಗುವಳಿ ಮಾಡುವಂತೆ ಮಧ್ಯಮ ನೀರಾವರಿ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ. ಇದಲ್ಲದೆ ಗಲವಾನಿಯ, ಮೋತಿಸಾಗರ ಯೋಜನೆಗಳಿಂದಲೂ ಇಲ್ಲಿಯ ಜಮೀನಿಗೆ ನೀರಾವರಿ ಸೌಲಭ್ಯ ದೊರಕಿದೆ. ಒಟ್ಟು 8,40,000 ಹೆಕ್ಟೇರ್ ಭೂಮಿಗೆ ನೀರಿನ ಆಸರೆ ದೊರೆತಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 63 ಸೆಂಮೀ. ಈ ಜಿಲ್ಲೆಯಲ್ಲಿ ಹತ್ತಿ, ಕಬ್ಬು, ಗೋಧಿ, ಮುಸುಕಿನ ಜೋಳ ಮತ್ತು ದ್ವಿದಳ ಧಾನ್ಯಗಳು ಬೆಳೆಯುತ್ತವೆ. ನದಿಯ ದಂಡೆಯ ಮೇಲೆ ಜನರು ಪುಟ್ಟಿಯ ಹಣ್ಣು ಬೆಳೆಯುತ್ತಾರೆ. ಬೇಸಾಯದ ಜಾನುವಾರುಗಳಲ್ಲದೆ ಕುರಿಗಳ ಸಾಕಣೆಯೂ ಈ ಜಿಲ್ಲೆಯಲ್ಲಿ ವಿಶೇಷ. ಟೋಂಕ್ ಪಟ್ಟಣದ ಬಳಿಯಲ್ಲಿರುವ ಮಾಲಪುರದಲ್ಲಿರುವ ಕುರಿಸಂಗೋಪನಾ ಕೇಂದ್ರ ರಾಜಸ್ಥಾನದಲ್ಲಿ ಹೆಸರಾದ ಕೇಂದ್ರವೆನಿಸಿದೆ. ಧರ್ಮ ಹದಗೊಳಿಸುವುದು ಈ ಜಿಲ್ಲೆಯ ಮುಖ್ಯ ಕೈಗಾರಿಕೆ. ಜಯಪುರದ ಸಾಮೀಪ್ಯದಿಂದಾಗಿ ಈ ಜಿಲ್ಲೆಯಲ್ಲಿ ಬಟ್ಟೆಗೆ ಬಣ್ಣಹಾಕುವ ಕೆಲಸ, ಉಣ್ಣೆ ತಯಾರಿಕೆ. ಜಮಖಾನೆಗಳ ನೇಯ್ಗೆ, ಆಭರಣಗಳ ಕೆತ್ತನೆ ಕೆಲಸ, ಹಿತ್ತಾಳೆ ತಾಮ್ರ ಪಾತ್ರೆ ತಯಾರಿಕೆ-ಮುಂತಾದ ಕೈಗಾರಿಕೆಗಳೂ ನಡೆಯುತ್ತವೆ. ಅಭ್ರಕ, ಸಬಕಾರದ ಕಲ್ಲು, ಸುಣ್ಣದ ಕಲ್ಲು ಇವು ಈ ಜಿಲ್ಲೆಯ ಮುಖ್ಯ ಖನಿಜಗಳು. ಒಟ್ಟು 1,084 ಗ್ರಾಮಗಳಿರುವ ಈ ಜಿಲ್ಲೆಯಲ್ಲಿ 477 ಪ್ರಾಥಮಿಕ ಶಾಲೆಗಳೂ 39 ಮಾಧ್ಯಮಿಕದ ಶಾಲೆಗಳೂ 19 ಉಚ್ಚ ಶಿಕ್ಷಣ ಶಾಲೆಗಳೂ 5 ಕಾಲೇಜುಗಳೂ ಉಂಟು. ಜಿಲ್ಲೆಯ ಸಾಕ್ಷರತೆ 13.64% ಮಾತ್ರ. ಟೋಂಕ್ ಬಳಿಯಲ್ಲಿರುವ ತಂಪು-ಬಿಸಿ ನೀರಿನ ಬುಗ್ಗೆಗಳು ಹೊರಗಿನವರನ್ನು ಆಕರ್ಷಿಸಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಟೋಂಕ್ ಪಟ್ಟಣ ಆಡಳಿತಕೇಂದ್ರ. ಇದು ಜಯಪುರದ ದಕ್ಷಿಣಕ್ಕೆ 60 ಮೈ. ದೂರದಲ್ಲಿದೆ. ಪಟ್ಟಣದ ಉತ್ತರಕ್ಕೆ 2 ಮೈ. ದೂರದಲ್ಲಿ ಬನಾಸ್ ನದಿ ಹರಿಯುತ್ತದೆ. ಟೋಂಕಿನ ಜನಸಂಖ್ಯೆ 55,866. ಬೆಟ್ಟದ ಒತ್ತಿನಲ್ಲಿರುವ ಹಳೆಯ ಪಟ್ಟಣದ ಸುತ್ತಲೂ ಕಲ್ಲಿನ ಗೋಡೆಯುಂಟು. ಆಧುನಿಕ ಪಟ್ಟಣ ಬೆಳೆಯುತ್ತಿರುವುದು ಹಳೆಯ ಪಟ್ಟಣದ ದಕ್ಷಿಣಕ್ಕೆ. ಇಲ್ಲಿಯ ಅನೇಕ ಕಟ್ಟಡಗಳನ್ನು ಇಲ್ಲಿ ಆಳಿದ ನವಾಬರು ಕಟ್ಟಿಸಿದರು. ಇದರ ವಿವಿಧ ಭಾಗಗಳಿಗೆ ಹಿಂದಿನ ನವಾಬರ ಹೆಸರುಗಳಿವೆ. ಪಟ್ಟಣದ ದಕ್ಷಿಣಕ್ಕೆ. ಭೂಮಗಢ ಎಂಬ ಕೋಟೆಯುಂಟು. ಅದರ ಪೂರ್ವಕ್ಕೆ ಅಮೀರ್‍ಖಾನನ ಠಾಣ್ಯದ ಅವಶೇಷಗಳಿವೆ. ಅಮೀರ್‍ಖಾನ್ 1817ರಲ್ಲಿ ಬ್ರಿಟಿಷರಿಗೆ ಶರಣಾದ ಪಿಂಡಾರಿ ನಾಯಕ. ಟೋಂಕ್ ಸಂಸ್ಥಾನವನ್ನು ಇವನು ಸ್ಥಾಪಿಸಿದನೆಂದು ಪ್ರತೀತಿ.
(ಬಿ.ಎ.ಎಸ್.)